ಮಂಗಳವಾರ, ಜನವರಿ 3, 2012

"ಮುಂಜಾವಿನ ತಿಳಿಗನಸು"


ಮುಂಜಾವಿನ ಅಭಿಷೇಕಕೆ ಪುಟಿದೆದ್ದಿದೆ ಮನಸು
ಕುಣಿದಾಡುವ ಹೃದಯದಲ್ಲಿ ಮುದ ನೀಡಿದೆ ಕನಸು
ಮುಂಜಾವಿನ ಆ ಮಂಜಿಗೆ ಮುತ್ತಿಕ್ಕಿವೆ ಕಿರಣ
ತಿಳಿಹಾಸಿನ ಹಸಿರಿನಲ್ಲಿ ನಾ ಇಟ್ಟೆನು ಚರಣ//


ಹಸಿರಾದ ಧರಿತ್ರಿಗೆ ಆಕಾಶದ ಹೊದಿಕೆ
ಗಿರಿಶೃಂಗದ ಸಾಲು ನೀಡುತ್ತಿವೆ ನೆರಿಗೆ//


ಮಸುಕಾದ ನಸುಕಿನಲ್ಲಿ ಹೊಳೆಯುತ್ತಿದೆ ಅಂಬರ
ಕಿರಣಗಳ ಸ್ಪರ್ಶದಲ್ಲಿ ಮೊಗ್ಗರಳಿದೆ ಮಲ್ಲಿಗೆ
ಮಕರಂದವ ಹೀರಲು ಝೇ೦ಕರಿಸಿದೆ ದುಂಬಿ
ನಿಶ್ಯಬ್ದದ ನಿಸರ್ಗಕೆ ಸ್ವರನೀಡಿದೆ ಖಗಸಾಲು//


ಹುಲುಹಾಸಿನ ಹಾಸಿಗೆಯಲಿ ಹಾರುತ್ತಿವೆ ಹಿರಣ
ಕಂಗೊಳಿಸುವ ಹರಿತ್ತಿಗೆ ಗರಿಬಿಚ್ಚಿದೆ ಮಯೂರ 
ತಿಳಿಯಾದ ನೀರಿನಲ್ಲಿ ಕಂಗೊಳಿಸಿದೆ ಕಮಲ
ಅವುಗಳ ನಡುವಲಿ ಈಜುತ್ತಿವೆ ಮೀನು//


ಈ ಇಬ್ಬನಿಯ ನಡುವೆ ಸುರಿಯುತ್ತಿದೆ ಹನಿಮಳೆ
ಬಡಿದಪ್ಪಿ ಸುರಿಮಳೆಯು ಬಿತ್ತರಿಸಿದೆ ರಂಗೋಲಿಯ ಚಿತ್ತಾರ
ಪ್ರಕೃತಿಯ ಆಹ್ಲಾದವ ಸವಿಯುತ್ತಿದೆ ಜೇನು//


ಕಣ್ತೆರೆದು ಎದ್ದೇಳು ಮನಬಿಚ್ಚಿ ಆನಂದಿಸು
ಪ್ರಕೃತಿಯ ಮಡಿಲಲ್ಲಿ ಸುಖದಿ ನೀ ನಿದ್ರಿಸು
ನಿಸರ್ಗದ ತೊಟ್ಟಿಲಲಿ ಗೋಚರಿಸಲಿ ತಿಳಿಗನಸು
ಈ ಸೊಬಗಿನ ವರ್ಷಧಾರೆ-ಪುಳಕಿಸಲಿ ಮೈ- ಮನಸು//
                                                                       - "ಶ್ರೀ"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ