ಗುರುವಾರ, ಡಿಸೆಂಬರ್ 22, 2011

"ಜಲ ವಿಸ್ಮಯ"


ಹೇಗೆ ಬಣ್ಣಿಸಲಿ ನಾ ಆ ಜಲಧಾರೆಯ ಪರಿ
ಹೇಗೆ ಚಿತ್ರಿಸಲಿ ನಾ ಆ ಧುಮ್ಮಿಕ್ಕುವ ಝರಿ 
ಎಲ್ಲವೂ ಪ್ರಕೃತಿಯ ಅಚ್ಚರಿ//


ಧುಮ್ಮಿಕ್ಕುವ ಜಲಧಾರೆಯ ಕಂಡು ಕಣ್ ಮನ ಮಿಡಿದಿದೆ 
ಅಲೆ ಅಲೆಯಾಗಿ ದಡವನ್ನು ಬಡಿವ ಸದ್ದು ಮನವನ್ನು ಕದಡಿದೆ
ಮಂದವಾಗಿ ಬೀಸುವ ತಂಗಾಳಿಯ ಆ ಸ್ಪರ್ಶ ಮೈನವಿರೆಳಿಸಿದೆ
ಇದ ಕಂಡು ಕಣ್ ಗಳ ಹರಿಸಿದ ನನಗೆ
ನಭೋ ಮಂಡಲವೇ ಕಲೆಗಾರನ ಸುಂದರ ಕಲೆಯಂತೆ 
                                       ಕಣ್ಣಲಿ ಅಚ್ಚಳಿದಿದೆ
ಒಟ್ಟಿನಲಿ ತನು ಮನ ಆಹ್ಲಾದದಿ ಮಿಂದೆದ್ದಿದೆ
ಮಿಡಿದಿದೆ, ಕದಡಿದೆ, ಮೈಮನ ತಣಿದಿದೆ 
                                       ಒಳ ಮನಸನು ಹುಚ್ಚೆಬ್ಬಿಸಿದೆ


ಜೀವರಾಶಿಗೆ ಜಲ ಉಸಿರು 
ಜಲವಿದ್ದರೆ ತಾನೇ ಎಲ್ಲಿಯೂ ಹಸಿರು..
ಆದರೆ ನನಗದು ಹಸಿರು, ಉಸಿರು, ಮನದಾಳದ ಕಲ್ಪತರು


ಉನ್ಮಾದದಲಿ ಹೇಳುವುದಾದರೆ 
ಕವಿಗೆ ಅದು ಕವಿತೆ, ಕವಿ ಸಾಲುಗಳ ಒರತೆ
ವೇದಾಂತಿಗೆ ಅದು ಚರಿತೆ, ಸಾಮಾನ್ಯಗೆ ಅದು ವಿಸ್ಮಯ
ರಸಿಕಂಗೆ ಅದೇ ಪ್ರಾಣ, ತ್ರಾಣ, ಜಗ ಸ್ವರ್ಗ
ಉತ್ಪ್ರೇಕ್ಷೆ ಆಗದಿದ್ದರೆ ಅದರಲ್ಲೇ ಆತ ಉನ್ಮತ್ತ....

"ಸುಂದರ ಕನಸು"


ನಿನ್ನ ಆ ಕೆಂದಾವರೆಯಂತಹ ಮೊಗವು 
ಮುಸುಕು ಮಾಡಿತು ನನ್ನೆಲ್ಲಾ ಭಾವನೆಗಳನು 
ನಿನ್ನ ಸೌಂದರ್ಯದ ಮೋಹದ ಪಾಶವು 
ಅರಳಿಸಿತು ನನ್ನಲಿ ಅನುರಾಗದ ಅಲೆಗಳನು 
ಅಂದು ನೀ ನಕ್ಕಾಗ ಚಂದ್ರನ ಮೊಗವು 
                                   ಬಾಡಿತ್ತು ಅಸೂಯೆಯಿಂದ 
ಆ ಮಾದಕ ನಗುವಿನ ಸಂಕೋಲೆ
ಬಂಧಿಯಾಗಿಸಿತು ನನ್ನ ಹೃದಯವನು ಪ್ರೀತಿಯಿಂದ//


ನಿನ್ನ ಬಳುಕುವ ಬಳ್ಳಿಯಂತಹ ದೇಹದ ಹೋಲಿಕೆ
ಏನೂ ಅಲ್ಲ ಆ ಬೇಲೂರ ಶಿಲಾ ಬಾಲಿಕೆ!!
ನಿನ್ನಲಿ ನಾ ಕಂಡೆ ಚುರುಕುತನ ಲವ ಲವಿಕೆ 
ಮೊದಲ ನೋಟಕ್ಕೇ ನನ್ನ ಮನಸಿಗಾಯ್ತು ಲವ್- ಲವಿಕೆ..//


ನಾನೋ! ನೀನೆಸೆದ ನಗುವಿನ ಗಾಳಕ್ಕೆ ಸಿಕ್ಕ ಮೀನಂತಾಗಿದ್ದೆ
ಪ್ರೇಮ ಸಾಗರದಲಿ ಮುಳುಗಿ ವಿಲವಿಲನೆ ಒದ್ದಾಡುತಿದ್ದೆ...
ಇನ್ನೇನು ನಿನಗೆ ನನ್ನ ಪ್ರೀತಿಯ ವಿಷಯ  ಹೇಳುವನಿದ್ದೆ 
ಕಣ್ತೆರೆದು, ಬಾಯ್ಬಿಟ್ಟು ಹೇಳುವೆನೆಂದು ಕೊಂಡಾಗ
                                            ನಿದ್ದೆಯಿಂದ ನಾನೆದ್ದೆ...
ಸುಂದರ ಕನಸಿಗೆ ಎಳ್ಳು ನೀರು ಬಿಟ್ಟಿದ್ದೆ...// 

ಮಂಗಳವಾರ, ಡಿಸೆಂಬರ್ 6, 2011

"ಅಗೋಚರ ಆತ್ಮ"

ಅಗೋಚರ ಆತ್ಮದ ಬಗೆಗೆ ಹೀಗೊಂದು ವಿಶ್ಲೇಷ....

ಬೀಸುವ ಗಾಳಿಯ ಹರಿಯುವ ನೀರಿನ
                              ವಾತಾವರಣವು ನೀನಾದೆ//
ಕೊರೆಯುವ ಚಳಿಯಲಿ ಇಬ್ಬನಿ ಮಸುಕಲಿ
                              ಹೊಂಗಿರಣವು ನೀನಾದೆ//
ತುಂತುರು ಮಳೆಯಲಿ ದಿನಕರನಡಿಯಲಿ
                              ಕಾಮನಬಿಲ್ಲು ನೀನಾದೆ//
ಹರಗಿದ ಇಳೆಯಲಿ ಪ್ರಕೃತಿಯ ಮಡಿಲಲಿ
                              ಹಸಿರಿನ ತೆನೆಯು ನೀನಾದೆ//
ಹಸಿರಿನ ಧರೆಯಲಿ ಗಿರಿಗಳ ನಡುವಲಿ
                              ಸುಜಲಧಾರೆಯು ನೀನಾದೆ//
ಅನನ್ಯ ವನಸಿರಿಯ ಕಸ್ತೂರಿ ಮೃಗದ
                              ಸೂಸುವ ಕಂಪು ನೀನಾದೆ//
ಅನಂತ ಆಗಸದ ಮೋಡದ ಮರೆಯಲಿ
                              ಚಿನ್ಮಯ ಚೇತನ ನೀನಾದೆ//
ಬಿತ್ತರ ಲೋಕದ ರವಿ ಮಂಡಲದ 
                              ಚಿರಂತನ ಮೂರ್ತಿಯು ನೀನಾದೆ//
ಪಂಚಭೂತದ ಆಸ್ತಿ ಪಂಜರದಲಿ
                              ಅಗೋಚರ ಆತ್ಮ ನೀನಾದೆ//

"ಕನ್ನಡ! ಕನ್ನಡ! ಕನ್ನಡ!"


ಕನ್ನಡ - ಕರುನಾಡ ಹಿರಿಮೆಯ ಬಗ್ಗೆ ಎಷ್ಟು ಬಣ್ಣಿಸಿದರೂ ಸಾಲದು....


 ಕನ್ನಡ! ಕನ್ನಡ! ಕನ್ನಡ!
ಕಲಿಗಳ ನಾಡು ಕನ್ನಡ
ನಲಿವಿನ ಬೀಡು ಕನ್ನಡ
ಗಿರಿಗಳ ತೋಪು ಕನ್ನಡ
ಕೋಟೆಯ ವರ್ಮ ಕನ್ನಡ
ನದಿಗಳ ಕಣಜ ಕನ್ನಡ
ಹೊನ್ನಿನ ಖನಿಯು ಕನ್ನಡ
ಸುಂದರ ಭಾಷೆಯು ಕನ್ನಡ
ಅತಿ ಸುಂದರ ಭಾಷೆಯು ಕನ್ನಡ//
                                           ಶ್ರೀಗಂಧದ ಸಿರಿಯು ಕನ್ನಡ
                                           ವಿಪಿನದ ಹಂದರ ಕನ್ನಡ
                                           ಮಾವಿನ ತೋರಣ ಕನ್ನಡ
                                           ಮಲ್ಲಿಗೆ ಕಂಪಿನ ಕನ್ನಡ
                                           ತ್ಯಾಗದ ತೇಗದ ಕನ್ನಡ
                                           ಚಂದನ ವೃಷ್ಟಿಯ ಕನ್ನಡ
                                           ಹೆಮ್ಮೆಯ ಧಾತ್ರಿ ಕನ್ನಡ
                                           ನಮ್ಮೆಲ್ಲರ ಹೆಮ್ಮೆಯ ಧಾತ್ರಿ ಕನ್ನಡ//
ಕವಿಗಳ ನೆಲೆಯು ಕನ್ನಡ
ಜ್ಞಾನದ ಪುಷ್ಕರ ಕನ್ನಡ
ರಾಜರ ರಾಜ್ಯ ಕನ್ನಡ
ಅರಮನೆ ಮಾಡು ಕನ್ನಡ
ಚಿಂತನ-ಮಂಥನ ಕನ್ನಡ
ತಂತ್ರಜ್ಞರ ಸೆಲೆಯು ಕನ್ನಡ
ಪ್ರಜ್ವಲ ರಾಜ್ಯ ಕನ್ನಡ
ಭರತ ದೇಶದ ಪ್ರಜ್ವಲ ರಾಜ್ಯ ಕನ್ನಡ//
                                                      ಎಲ್ಲರ ಪ್ರೀತಿ ಕನ್ನಡ
                                                      ಪ್ರೇಮ ವತ್ಸಲ ಕನ್ನಡ
                                                      ಮಮತೆಯ ವನಜ ಕನ್ನಡ
                                                      ಸುಹಾಸಿನಿಯು ಕನ್ನಡ
                                                      ನವರಸ ಬಿಂದಿಗೆ ಕನ್ನಡ
                                                      ಅಪಾರ ಖ್ಯಾತಿಯ ಕನ್ನಡ
                                                      ಅಮರ ಜ್ಯೋತಿಯು ಕನ್ನಡ
                                                      ಮಂದಾರ ಪುಷ್ಪವು ಕನ್ನಡ
                                                      ಹೃದಯವಂತರ ನೀಡು ಕನ್ನಡ
                                                      ಸ ಹೃದಯವಂತರ ನೀ ನೀಡು ಕನ್ನಡ//

ಸೋಮವಾರ, ನವೆಂಬರ್ 21, 2011

"ಸಗ್ಗದ ಬದುಕು"



ನನ್ನ ಬ್ಲಾಗಿಂಗ್ ಪಯಣವನ್ನು ಈ ಕವನದೊಂದಿಗೆ ಶುರು ಮಾಡುತ್ತಿದ್ದೇನೆ: 

ಬದುಕೆಂಬ ಮೂರಕ್ಷರ ಅತಿ ಸುಂದರ ಅತಿ ಮಧುರ
ಜೀವ ಭಾವಗಳ ಸುಖ ಸಾಗರ ಸಂಬಂಧಗಳ ಸೇತು
ಭಾವನೆಗಳ ಕಡಲು ಅಲೆಯಾಗಿ ಹರಿಯುವುದಿಲ್ಲಿ
ನೀಡುವುದು ಮನಕೆ ಪ್ರಶಾಂತತೆ ಒಂಥರಾ ನಿರ್ಲಿಪ್ತತೆ //


ಮೂರಕ್ಷರದ ನಾಲ್ಕು ದಿನಗಳ ಈ ಬದುಕು 
ಕಲಿಸುವುದು ದಿನಂಪ್ರತಿ ಹೊಸ ಹೊಸ ವಿಷಯ 
ನೀಡುವುದು ಬಾಳಿನ ಪಥಕೆ ಹೊಸ ರೂಪ 
ಅದರ ಸೊಗಡು ಸಂಭ್ರಮ, ಬೆಳದಿಂಗಳ ಚುಕ್ಕಿ-ಚಂದ್ರಮ //


ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೋ ಸೇರುವ ನಾವು
ಗಳಿಸುವೆವು-ಕಳೆಯುವೆವು ಹಣ, ಸ್ಥಾನ, ಮಾನ
ಸಂಭಂದಗಳಿಗೆ ಬೆಲೆ ಕಟ್ಟಲಾದೀತೆ?
ಬೆರೆವೆವು - ಸೇರುವೆವು ನೂರೆಂಟು ಜನರ ಒಡಗೂಡಿ 
ಬಿಡಿಸಲಾದೀತೇ ಸಂಭಂದಗಳ ಬಂಧವ - ಕೊಂಡಿಯ?
ಮರೆಯಲಾದೀತೆ ಕಳೆವ ಮಧುರ ಕ್ಷಣಗಳ ಚಂದವ?//


ಎಲ್ಲರೂ ನೀಡುವರು ಬದುಕಿಗೆ ವಿಧ ವಿಧದ ಅರ್ಥ 
ಬದುಕು ಬರಿದಾಗಿ ಹೋಗುವುದು ಸಿಗದಿದ್ದರೆ ಅದಕೆ ಪರಿಪೂರ್ಣ ಅರ್ಥ
ಬದುಕ ಬದುಕಾಗಿ ಬದುಕಿದರೆ ಸಗ್ಗವಾಗುವುದು ಬದುಕು //


"ಮನಸು - Unlocked "


ಎಲ್ಲರಿಗೂ ಹಾಯ್!!!!!

ನಾನು ಶ್ರೀಧರ ಮಳಲಗದ್ದೆ . ಹುಟ್ಟಿ ಬೆಳೆದದ್ದು ಸೊರಬ ತಾಲ್ಲುಕಿನ ಮಳಲಗದ್ದೆ ಎಂಬ ಚಿಕ್ಕ ಹಳ್ಳಿಯಲ್ಲಿ. ಆ ಹಳ್ಳಿಯ ಸೊಗಡಲ್ಲಿ - ಪ್ರಕೃತಿಯ ಮಡಿಲಲ್ಲಿ ಬೆಳೆದ ನಾನು ಈ ಕಾಂಕ್ರೀಟ್ ಕಾಡಿನ ಗಗನ ಚುಂಬಿ ಕಟ್ಟಡಗಳಿಗೆ, ಹೈಟೆಕ್ ಫ್ಲಯೋವೆರ್ಗಳಿಗೆ, ಎಕ್ಷ್ಪ್ರೆಸ್ ವೇಗಳಿಗೆ, ಎ ಸಿ ರೂಮುಗಳಿಗೆ, ಶಾಪಿಂಗ್ ಮಾಲ್ ಗಳಿಗೆ,  ಸಿಗ್ನಲ್ಲುಗಳಿಗೆ, ಸ್ಪೀಡ್ ಬ್ರೇಕರುಗಳಿಗೆ ನನಗೇ ಅರಿವಿಲ್ಲದಂತೆ ಹೊಂದಿಕೊಂಡು ವಾಸಿಸುತ್ತಿರುವ ಸಾವಿರಾರು ಮಲೆನಾಡಿಗರಲ್ಲೊಬ್ಬ.

ಕವನಗಳನ್ನು ಬರೆಯುವುದು ನನ್ನ ಹವ್ಯಾಸ. ನನ್ನ ಅವಿಭಾಜ್ಯ ಅಂಗ ಅಂದ್ರೆ ನನ್ನ ಪೆನ್ನು ಹಾಗೂ ನನ್ನ ಡೈರಿ ಇಲ್ಲವೇ ನನ್ನ ವ್ಯಾಲೆಟ್ಟಿನಲ್ಲಿ ೧ ಶೀಟ್ ಪೇಪರ್ (ಮನಬಂದಾಗ ಗೀಚಲು) . ಮನಸ್ಸನ್ನು ತೆರೆದಿಟ್ಟು ಅದು ಹೇಳಿದಂತೆ ಗೀಚುವುದು ನನ್ನ ಹವ್ಯಾಸ. ಹೈಸ್ಕೂಲಿನಿಂದಲೂ ಬರೆಯುವ ಗೀಳನ್ನು ಹತ್ತಿಸಿಕೊಂಡ ನಾನು ಕೇವಲ ಡೈರಿಯಲ್ಲಿ ಬರೆಯುತ್ತಿದ್ದೆ. ಪ್ರಕೃತಿಯ ಮಡಿಲಲ್ಲಿ ಕೂತಾಗ, ಮಳೆ ಬಂದಾಗ, ಬೆಂಗಳೂರಿನ ಹಸಿರು ಜಾಗ (ಪಾರ್ಕ್)ಗಳಲ್ಲಿ, ಇನ್ನು ಎಲ್ಲೆಲ್ಲೋ ನನ್ನ ಕವನ ಪ್ರಜ್ಞೆ ಎಚ್ಚೆತ್ತುಕೊಳ್ಳುತ್ತದೆ.  ಗೆಳೆಯರ ಸಲಹೆಯಂತೆ ನನ್ನದೊಂದು ಬ್ಲಾಗ್ ಶುರುಮಾಡುತ್ತಿದ್ದೇನೆ. ನನ್ನ ಡೈರಿಯಲ್ಲಿರುವ ಕವಿತೆಗಳನ್ನ ಬ್ಲಾಗ್ ಗೆ ಭಟ್ಟಿ ಇಳಿಸುವ ಪ್ರಯತ್ನ ಮಾಡುತ್ತಿದ್ದೇನೆ.

ಮನಸನ್ನು ತೆರೆದಿಟ್ಟು ಸುಮ್ ಸುಮ್ನೆ ಏನನ್ನಾದರೂ ಗೀಚಿದ್ದನ್ನ ಬ್ಲಾಗ್ ಗೆ ಇಳಿಸ್ತಾ ಇರ್ತೇನೆ. ಅದಕೇನೆ ಇದು  "ಮನಸು - Unlocked ".

ನಿಮ್ಮ ಅಭಿಪ್ರಾಯಗಳಿಗೆ, ಸಲಹೆಗಳಿಗೆ ಎಂದಿಗೂ ಈ ಮನಸು - "Unlocked ".