ಸೋಮವಾರ, ನವೆಂಬರ್ 21, 2011

"ಸಗ್ಗದ ಬದುಕು"



ನನ್ನ ಬ್ಲಾಗಿಂಗ್ ಪಯಣವನ್ನು ಈ ಕವನದೊಂದಿಗೆ ಶುರು ಮಾಡುತ್ತಿದ್ದೇನೆ: 

ಬದುಕೆಂಬ ಮೂರಕ್ಷರ ಅತಿ ಸುಂದರ ಅತಿ ಮಧುರ
ಜೀವ ಭಾವಗಳ ಸುಖ ಸಾಗರ ಸಂಬಂಧಗಳ ಸೇತು
ಭಾವನೆಗಳ ಕಡಲು ಅಲೆಯಾಗಿ ಹರಿಯುವುದಿಲ್ಲಿ
ನೀಡುವುದು ಮನಕೆ ಪ್ರಶಾಂತತೆ ಒಂಥರಾ ನಿರ್ಲಿಪ್ತತೆ //


ಮೂರಕ್ಷರದ ನಾಲ್ಕು ದಿನಗಳ ಈ ಬದುಕು 
ಕಲಿಸುವುದು ದಿನಂಪ್ರತಿ ಹೊಸ ಹೊಸ ವಿಷಯ 
ನೀಡುವುದು ಬಾಳಿನ ಪಥಕೆ ಹೊಸ ರೂಪ 
ಅದರ ಸೊಗಡು ಸಂಭ್ರಮ, ಬೆಳದಿಂಗಳ ಚುಕ್ಕಿ-ಚಂದ್ರಮ //


ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೋ ಸೇರುವ ನಾವು
ಗಳಿಸುವೆವು-ಕಳೆಯುವೆವು ಹಣ, ಸ್ಥಾನ, ಮಾನ
ಸಂಭಂದಗಳಿಗೆ ಬೆಲೆ ಕಟ್ಟಲಾದೀತೆ?
ಬೆರೆವೆವು - ಸೇರುವೆವು ನೂರೆಂಟು ಜನರ ಒಡಗೂಡಿ 
ಬಿಡಿಸಲಾದೀತೇ ಸಂಭಂದಗಳ ಬಂಧವ - ಕೊಂಡಿಯ?
ಮರೆಯಲಾದೀತೆ ಕಳೆವ ಮಧುರ ಕ್ಷಣಗಳ ಚಂದವ?//


ಎಲ್ಲರೂ ನೀಡುವರು ಬದುಕಿಗೆ ವಿಧ ವಿಧದ ಅರ್ಥ 
ಬದುಕು ಬರಿದಾಗಿ ಹೋಗುವುದು ಸಿಗದಿದ್ದರೆ ಅದಕೆ ಪರಿಪೂರ್ಣ ಅರ್ಥ
ಬದುಕ ಬದುಕಾಗಿ ಬದುಕಿದರೆ ಸಗ್ಗವಾಗುವುದು ಬದುಕು //


"ಮನಸು - Unlocked "


ಎಲ್ಲರಿಗೂ ಹಾಯ್!!!!!

ನಾನು ಶ್ರೀಧರ ಮಳಲಗದ್ದೆ . ಹುಟ್ಟಿ ಬೆಳೆದದ್ದು ಸೊರಬ ತಾಲ್ಲುಕಿನ ಮಳಲಗದ್ದೆ ಎಂಬ ಚಿಕ್ಕ ಹಳ್ಳಿಯಲ್ಲಿ. ಆ ಹಳ್ಳಿಯ ಸೊಗಡಲ್ಲಿ - ಪ್ರಕೃತಿಯ ಮಡಿಲಲ್ಲಿ ಬೆಳೆದ ನಾನು ಈ ಕಾಂಕ್ರೀಟ್ ಕಾಡಿನ ಗಗನ ಚುಂಬಿ ಕಟ್ಟಡಗಳಿಗೆ, ಹೈಟೆಕ್ ಫ್ಲಯೋವೆರ್ಗಳಿಗೆ, ಎಕ್ಷ್ಪ್ರೆಸ್ ವೇಗಳಿಗೆ, ಎ ಸಿ ರೂಮುಗಳಿಗೆ, ಶಾಪಿಂಗ್ ಮಾಲ್ ಗಳಿಗೆ,  ಸಿಗ್ನಲ್ಲುಗಳಿಗೆ, ಸ್ಪೀಡ್ ಬ್ರೇಕರುಗಳಿಗೆ ನನಗೇ ಅರಿವಿಲ್ಲದಂತೆ ಹೊಂದಿಕೊಂಡು ವಾಸಿಸುತ್ತಿರುವ ಸಾವಿರಾರು ಮಲೆನಾಡಿಗರಲ್ಲೊಬ್ಬ.

ಕವನಗಳನ್ನು ಬರೆಯುವುದು ನನ್ನ ಹವ್ಯಾಸ. ನನ್ನ ಅವಿಭಾಜ್ಯ ಅಂಗ ಅಂದ್ರೆ ನನ್ನ ಪೆನ್ನು ಹಾಗೂ ನನ್ನ ಡೈರಿ ಇಲ್ಲವೇ ನನ್ನ ವ್ಯಾಲೆಟ್ಟಿನಲ್ಲಿ ೧ ಶೀಟ್ ಪೇಪರ್ (ಮನಬಂದಾಗ ಗೀಚಲು) . ಮನಸ್ಸನ್ನು ತೆರೆದಿಟ್ಟು ಅದು ಹೇಳಿದಂತೆ ಗೀಚುವುದು ನನ್ನ ಹವ್ಯಾಸ. ಹೈಸ್ಕೂಲಿನಿಂದಲೂ ಬರೆಯುವ ಗೀಳನ್ನು ಹತ್ತಿಸಿಕೊಂಡ ನಾನು ಕೇವಲ ಡೈರಿಯಲ್ಲಿ ಬರೆಯುತ್ತಿದ್ದೆ. ಪ್ರಕೃತಿಯ ಮಡಿಲಲ್ಲಿ ಕೂತಾಗ, ಮಳೆ ಬಂದಾಗ, ಬೆಂಗಳೂರಿನ ಹಸಿರು ಜಾಗ (ಪಾರ್ಕ್)ಗಳಲ್ಲಿ, ಇನ್ನು ಎಲ್ಲೆಲ್ಲೋ ನನ್ನ ಕವನ ಪ್ರಜ್ಞೆ ಎಚ್ಚೆತ್ತುಕೊಳ್ಳುತ್ತದೆ.  ಗೆಳೆಯರ ಸಲಹೆಯಂತೆ ನನ್ನದೊಂದು ಬ್ಲಾಗ್ ಶುರುಮಾಡುತ್ತಿದ್ದೇನೆ. ನನ್ನ ಡೈರಿಯಲ್ಲಿರುವ ಕವಿತೆಗಳನ್ನ ಬ್ಲಾಗ್ ಗೆ ಭಟ್ಟಿ ಇಳಿಸುವ ಪ್ರಯತ್ನ ಮಾಡುತ್ತಿದ್ದೇನೆ.

ಮನಸನ್ನು ತೆರೆದಿಟ್ಟು ಸುಮ್ ಸುಮ್ನೆ ಏನನ್ನಾದರೂ ಗೀಚಿದ್ದನ್ನ ಬ್ಲಾಗ್ ಗೆ ಇಳಿಸ್ತಾ ಇರ್ತೇನೆ. ಅದಕೇನೆ ಇದು  "ಮನಸು - Unlocked ".

ನಿಮ್ಮ ಅಭಿಪ್ರಾಯಗಳಿಗೆ, ಸಲಹೆಗಳಿಗೆ ಎಂದಿಗೂ ಈ ಮನಸು - "Unlocked ".