ಮಂಗಳವಾರ, ಜನವರಿ 3, 2012

"ಬಾಲ್ಯ"


ಬಾಲ್ಯ! ಅಪ್ರತಿಮ ಅದರ ಚಿತ್ರಣ
ಶುಭ್ರ, ಮುಗ್ಧ ಕೋಮಲ ಪ್ರಾಣ


ಹಾರುವೆವು ಸ್ವಚ್ಛಂದ ಹಕ್ಕಿಯಂತೆ ರೆಕ್ಕೆ ಬಿಚ್ಚಿ 
ಕಂಡಿದ್ದನ್ನ, ಕೇಳಿದ್ದನ್ನ ಹೇಳುವೆವು
                         ಮುಚ್ಚುಮರೆಯಿಲ್ಲದೆ ಮನ ಬಿಚ್ಚಿ


ನಮಗಾರು ಸಾಟಿ ಆ ದಿನಗಳಲಿ?
ನಮಗೆ ನಾವೇ ಸಾಟಿ ಜೀವನ ರಣರಂಗದಲಿ
ಬೀಳುವೆವು, ಜಾರುವೆವು, ಅನೇಕ ನೋವುಗಳ ಎದುರಿಸುವೆವು
ಬಿದ್ದು, ಎದ್ದು, ನೋವುಗಳ ಮರೆತು
                      ಗೆಲುವಿನ ಊಟವ ಉಣುವೆವು...


ಲೋಕದ ಜಂಜಾಟಗಳ ಅರಿಯೆವು
ಮೋಸ, ಕಪಟ, ವಂಚನೆಗಳ ತಿಳಿಯೆವು
ಬದುಕಿನ ಸಂಕೋಲೆಯಿಂದ ಮುಕ್ತರು ನಾವು
ಎಲ್ಲದರಿಂದ ಸ್ವತಂತ್ರರು ನಾವು, ಎಲ್ಲರಿಂದ ಸ್ವತಂತ್ರರು


ಬೇಡಿದೆನು ನಾ ದೇವರಲಿ
ಕಸಿಯಬೇಡ ಬಾಲ್ಯವನು
ಚಿರವಾಗಿಸು ನನ್ನ ಸ್ವರ್ಣಮಯ ಲೋಕವನು


ಆದರೆ ಕಾಲಚಕ್ರವ ತಡೆವರು ಯಾರು?
ಗಡಿಯಾರದ ಮುಳ್ಳ ನಿಲಿಸುವರು ಯಾರು?
ಬದುಕಲೆಲ್ಲವೂ ನಶ್ವರ, ಕ್ಷಣಿಕ
ಹುಟ್ಟಿದ ಮೇಲೆ ಕಾಣಲೇಬೇಕು ಬಾಲ್ಯ
ಯೌವನ ಮುಪ್ಪನು ಸಾಯುವ ತನಕ
ಅನುಭವಿಸಬೇಕು ಸಂತಸದಿಂದ ಜೀವವಿರುವ ತನಕ...


                                                                      -"ಶ್ರೀ" 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ